ಕಾಲನೇಮಿ

ರಾವಣನ ಸೋದರಮಾವ ಮಾರೀಚನ ಮಗ. ರಾಮ ರಾವಣರ ಯುದ್ಧದಲ್ಲಿ ಲಕ್ಷ್ಮಣ ಅಷ್ಟಘಂಟಾ ಶಕ್ತಿಯಿಂದ ಮೂರ್ಛಿತನಾದಾಗ ವಾನರ ವೈದ್ಯ ಸುಷೇಣ ಸಂಜೀವನಿಲತೆಯನ್ನು ತರಲು ಹನುಮಂತನನ್ನು ಚಂದ್ರ ದ್ರೋಣ ಪರ್ವತಕ್ಕೆ ಕಳಿಸಿದ. ಇದನ್ನು ತಿಳಿದ ರಾವಣ ಕಾಲನೇಮಿಯನ್ನು ಕರೆದು ಹೇಗಾದರೂ ಹನುಮಂತನಿಗೆ ವಿಘ್ನವನ್ನುಂಟುಮಾಡೆಂದು ಹೇಳಿದ. ಕಾಲನೇಮಿ ಹನುಮಂತನಿಗಿಂತ ಮೊದಲೇ ಅಲ್ಲಿಗೆ ಹೋಗಿ ಪರ್ಣಕುಟೀರವೊಂದರಲ್ಲಿ ತಪಸ್ವಿ ವೇಷದಲ್ಲಿ ಕುಳಿತಿದ್ದ. ಹನುಮಂತ ಹೋದಾಗ ಅವನನ್ನು ಕರೆದು ದಣಿವಾರಿಸಿಕೊಂಡು ಹೋಗೆಂದು ಒತ್ತಾಯ ಮಾಡಿದ. ಹನುಮಂತ ಅಲ್ಲಿಯ ಕೊಳದಲ್ಲಿ ಕೈಕಾಲು ತೊಳೆಯಲು ಹೋದಾಗ ಅಲ್ಲಿದ್ದ ಮೊಸಳೆಯೊಂದು ಅವನನ್ನು ಹಿಡಿಯಿತು. ಹನುಮಂತ ಅದನ್ನು ಕೊಂದಾಗ ಶಾಪವಿಮುಕ್ತನಾದ ಗಂಧರ್ವನೊಬ್ಬ ಹೊರಬಂದು ಕಾಲನೇಮಿಯ ಸಮಾಚಾರವನ್ನು ತಿಳಿಸಿ ಹೋದ. ಅನಂತರ ಹನುಮಂತ ಕಾಲನೇಮಿಯನ್ನು ಕೊಂದು ಸಂಜೀವನಿ ಲತೆ ಕಾಣದೆ ಇಡೀ ಪರ್ವತವನ್ನೇ ಹೊತ್ತು ಸುಷೇಣನಲ್ಲಿಗೆ ಹೋದ.

 ಇದೇ ಹೆಸರಿನ ಮತ್ತೊಬ್ಬ ರಾಕ್ಷಸನಿದ್ದಾನೆ. ದಿತಿಪುತ್ರನಾದ ವಜ್ರಾಂಗನ ಮಕ್ಕಳಾದ ಮಯ, ತಾರಕಾಸುರ, ವಿರೋಚನ, ಹಯಗ್ರೀವ, ಪ್ರಲಂಬ ಮುಂತಾದವರು ವಿಷ್ಣುವಿನಿಂದ ಹತರಾದಾಗ ಶತಮುಖನಾದ ಈ ಕಾಲನೇಮಿ ತನ್ನ ಅತಿಕಾಯದಿಂದ ದೇವತೆಗಳ ಎದುರಾಗಿ ಅವರನ್ನು ಸೋಲಿಸಿ ಇಂದ್ರ ಪಟ್ಟವನ್ನೇರಿದ. ಇಡೀ ದೇವತೆಗಳೆಲ್ಲ ಈತನ ಹೊಗಳುಭಟ್ಟರಾದರೂ ವೇದ, ಧರ್ಮ, ಸತ್ಯ, ಕ್ಷಮಾ, ಲಕ್ಷ್ಮೀ-ಈ ಐದೂ ಕಾಲನೇಮಿಯ ವಿಚಾರದಲ್ಲಿ ಅಸಡ್ಡೆಯಿಂದಿದ್ದುವು. ಇವುಗಳಿಗೆ ಆಶ್ರಯದಾತನಾದ ವಿಷ್ಣುವನ್ನೇ ಸಂಹರಿಸಬೇಕೆಂದು ಕಾಲನೇಮಿ ವೈಕುಂಠಕ್ಕೆ ಹೋದಾಗ ಅವನ ನೂರು ಮುಖಗಳು ವಿಷ್ಣುವಿನ ಚಕ್ರಾಯುಧದಿಂದ ಉರುಳಿದವು. ಈ ವೃತ್ತಾಂತ ಮತ್ಸ್ಯಪುರಾಣ, ಮಹಾಭಾರತ ಹರಿವಂಶಗಳಲ್ಲಿ ಬರುತ್ತದೆ.   

 (ಬಿ.ಎಚ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ